ಹೆಮ್ಮಿಗೆ
	ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನ ಒಂದು ಹಳ್ಳಿ. ಕಸಬೆಯ ಪೂರ್ವಕ್ಕೆ 11 ಕಿಮೀ ದೂರದಲ್ಲಿ ಕಾವೇರಿಯ ಬಲದಂಡೆಯ ಮೇಲಿದೆ. 

	ಈ ಗ್ರಾಮಕ್ಕೆ ಬಹುಪ್ರಾಚೀನ ಇತಿಹಾಸವಿದೆ. ತಲಕಾಡಿಗೆ ನದಿ ದಾಟಿಹೋಗಲು ಮುಖ್ಯವಾದ ಹಾಯ್ಗಡದ ಬಳಿಯೇ ಬೆಳೆದ ಈ ಊರಿನಲ್ಲಿ ಫಲವತ್ತಾದ ಭೂಮಿ, ಕಾವೇರಿಯ ನಿರಂತರವಾದ ನೀರಿನ ಅನುಕೂಲವಿದ್ದು, ಚರಿತ್ರಪೂರ್ವಕಾಲದಿಂದಲೂ ಇಲ್ಲಿ ಜನವಸತಿ ಇದ್ದುದು ಕಂಡುಬಂದಿದೆ. ಗಂಗರ ಶಾಸನಗಳಲ್ಲಿ ಇದನ್ನು ಪೆಮೊಗೆ ಎಂದಿದ್ದರೆ ಮುಂದೆ ವಿಜಯನಗರ ಮತ್ತು ಅನಂತರದ ಕಾಲಗಳಲ್ಲಿ ಹೆಮ್ಮುಗೆ, ಹೆಮ್ಮುಗರೆ ಎಂದೂ ಕರೆದಿದೆ. ಪ್ರಮುಖವಾದ ಹಾಯ್ಗಡಕ್ಕೆ ಹೊಂದಿಕೊಂಡು ಈ ಊರು ಇದ್ದುದರಿಂದ ಇದನ್ನು ಹೆಮ್ಮೊಗೆ ಎಂದರೆ ಹಿರಿಯ ಮೊಗೆ ಅಥವಾ ಹಾಯ್ಗಡ ಎಂಬ ಅರ್ಥದಲ್ಲಿ ಕರೆದಿರಬಹುದು. ಗಂಗರ ಕಾಲದ ಊರು ಹಾಯ್ಗಡಕ್ಕೆ ಹೊಂದಿಕೊಂ ಡಂತೆ ಇದ್ದುದು ಅಲ್ಲಿ ದೊರೆತ ಆ ಕಾಲದ ಅವಶೇಷಗಳು, ಗಂಗ ವಾಸ್ತುಶಿಲ್ಪ ರೀತಿಗೆ ಸೇರಿದ ಸೂರ್ಯನ ವಿಗ್ರಹ, ಕಂಬಗಳು ಮೊದಲಾದ ವುಗಳಿಂದ ಸ್ಪಷ್ಟಪಡುತ್ತದೆ. ಚೋಳರು ಈ ಪ್ರದೇಶವನ್ನಾಕ್ರಮಿಸಿ ತಲಕಾಡಿನಲ್ಲಿ ಅವರ ಅಧಿಕಾರಿ ಆಡಳಿತ ವಹಿಸಿಕೊಂಡಮೇಲೆ ಇಲ್ಲಿಯ ವರದರಾಜಸ್ವಾಮಿ ದೇವಾಲಯದ ನಿರ್ಮಾಣವಾಗಿ ಅದರ ಮುಂದಿನ ಊರು ಬೆಳೆದಿರಬೇಕು. ಚೋಳರ ಕಾಲಕ್ಕೆ ಸೇರಿದ್ದಿರಬಹುದಾದ ತೋರಣಗಲ್ಲಿನ ಶಿಲ್ಪವೂ ಇಲ್ಲಿ ದೊರೆತಿದೆ. ವರದರಾಜಸ್ವಾಮಿ ದೇವಾಲಯ ಮಾತ್ರ ಮುಂದೆ ವಿಜಯನಗರದ ಕಾಲದಲ್ಲಿ ಪುನರ್ನಿರ್ಮಾ ಣವಾದಂತೆ ತೋರುತ್ತದೆ. ಬಹುಶಃ ಹೊಯ್ಸಳ ವಿಷ್ಣುವರ್ಧನ ತಲಕಾಡಿನ ಮೇಲೆ ದಂಡೆತ್ತಿಬಂದು ಚೋಳರನ್ನು ಓಡಿಸಿದಾಗ ಇಲ್ಲಿ ನಡೆದ ಯುದ್ಧದಲ್ಲಿ ಈ ಊರು ನಾಶವಾಗಿರಬೇಕು. ಮುಂದೆ ವಿಜಯನಗರದ ಇಮ್ಮಡಿ ಹರಿಹರನ ಕಾಲದಲ್ಲಿ(1397) ಹೆಮ್ಮುಗೆಯನ್ನು ಅಗ್ರಹಾರವನ್ನಾಗಿ ಮಾಡಿ ಹರಿಹರರಾಜೇಂದ್ರಪುರವೆಂದು ಹೆಸರಿಟ್ಟರು. ಸುಮಾರು ಇದೇ ಕಾಲದಲ್ಲಿ ತಲಕಾಡಿನಲ್ಲಿ ಅಧಿಕಾರಿಯಾಗಿದ್ದ ಮಾಧವಮಂತ್ರಿ ಹಾಯ್ಗಡಕ್ಕೆ ಹೊಂದಿದಂತೆ ಕಾವೇರಿ ನದಿಗೆ ಒಂದು ಅಡ್ಡಕಟ್ಟೆ ಹಾಕಿಸಿದ. ಇದು ಈಗಲೂ ಮಾಧವ ಮಂತ್ರಿ ಅಣೆಕಟ್ಟು ಎಂದು ಪ್ರಸಿದ್ಧವಾಗಿದೆ. ಈ ಕಾಲದಲ್ಲಿ ಅದನ್ನು ಹೆಮ್ಮುಗೆ ಹೊಸಹಳ್ಳಿ ಎಂದು ಕರೆದಿರುವುದು ಈ ಊರನ್ನು ಹೊಸದಾಗಿ ನಿರ್ಮಿಸಿದುದನ್ನು ಸೂಚಿಸುತ್ತದೆ. 1526ರಲ್ಲಿ ಕೃಷ್ಣದೇವರಾಯ ಇದೇ ಹೆಮ್ಮುಗೆಯನ್ನು ಮತ್ತೆ ದತ್ತಿಯಾಗಿ ಬಿಟ್ಟ. ಈಗ ಉಳಿದುಬಂದಿರುವ ವರದರಾಜಸ್ವಾಮಿ ದೇವಾಲಯ ಎತ್ತರವಾದ ಜಗತಿಯ ಮೇಲೆ ಕಟ್ಟಿರುವ ವಿಜಯನಗರದ ಕಾಲದ ಸರಳವಾದ ಗುಡಿ. ಮೂಲವಿಗ್ರಹ ಮಾತ್ರ ಚೋಳರ ಕಾಲದ ಸುಂದರವಾದ ಮೂರ್ತಿ. ಇದಲ್ಲದೆ ಊರಿನಲ್ಲಿ ಕೆಲವು ವೀರಗಲ್ಲುಗಳೂ ಇವೆ. 
	
ಚಾರಿತ್ರಿಕ ಕಾಲದಲ್ಲಿ ಈ ಊರಿನ ಬೆಳೆವಣಿಗೆ ಇಷ್ಟಾದರೆ ಚರಿತ್ರ ಪೂರ್ವ ಕಾಲದಲ್ಲಿಯೇ ಇಲ್ಲಿ ಹೆಚ್ಚಿನ ಜನವಸತಿ ಇದ್ದುದು ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನಗಳಿಂದ(1964) ವ್ಯಕ್ತವಾಗಿದೆ. ಊರಿನ ಮುಂದೆ ಮತ್ತು ಮಾಧವಮಂತ್ರಿ ಅಣೆಕಟ್ಟಿನ ಬಳಿ ಈಗ ನೀರು ಸುತ್ತಿಕೊಂಡು ದ್ವೀಪವಾಗಿರುವ ಆದಿಯನ ತಿಟ್ಟು ಎಂಬ ದಿಬ್ಬದಲ್ಲಿ-ಹೀಗೆ ಎರಡು ಕಡೆ ನಡೆದ ಉತ್ಖನನಗಳಲ್ಲಿ ಎರಡು ಬೇರೆ ಬೇರೆ ಕಾಲಗಳಿಗೆ ಸೇರಿದ ಬೇರೆ ಬೇರೆ ಸಂಸ್ಕøತಿಗಳು ಬೆಳೆದು ಬಂದುದು ಪ್ರಕಟವಾಯಿತು. ಮೊದಲನೆಯದು ನವಶಿಲಾ-ತಾಮ್ರ ಶಿಲಾಯುಗಕ್ಕೆ ಸೇರಿದುದು. ಮುಖ್ಯವಾಗಿ ಆದಿಯನ ತಿಟ್ಟು ಪ್ರದೇಶದಲ್ಲಿ ಇದರ ಬೆಳೆವಣಿಗೆಯನ್ನು ಗುರುತಿಸಬಹುದು. ಇಲ್ಲಿ ದೊರೆತ ಮಡಕೆಗಳು ಕೈಯಿಂದ ಮಾಡಿದುವು. ಕೆಲವು ವೇಳೆ ಅವಕ್ಕೆ ತೆಳುಬಣ್ಣ ಲೇಪಿಸಿ ಉಜ್ಜಿಹೊಳಪು ಬರಿಸಿರುವುದುಂಟು. ಇದರಿಂದ ಬೂದು, ಮಾಸಲು, ಕೆಂಪು ಅಥವಾ ಕಂದುಬಣ್ಣಗಳಲ್ಲಿ ಅವು ಕಂಡುಬರುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ಕಂಡುಬರುವುವೆಂದರೆ ಗುಂಡಾದ, ದೊಡ್ಡಬಾಯುಳ್ಳ, ಅಗಲವಾಗಿ ಹೊರಮುಖವಾಗಿ ಎದ್ದಿರುವ ಕಂಠಗಳನ್ನುಳ್ಳ ಮಡಕೆಗಳು, ಗುಂಡು ತಳವುಳ್ಳ, ಕಂಠವಿಲ್ಲದ ಆದರೆ ನಾಲಗೆಯಂತೆ ಚಾಚಿರುವ ಮೂತಿಯಿರುವ ಬೋಗುಣಿಗಳು, ಬಟ್ಟಲುಗಳು, ಇವುಗಳೊಂದಿಗೆ ತಿರುಮಕೂಡಲು ನರಸೀಪುರದಲ್ಲಿ ಕಂಡುಬಂದಿರುವ ವಿಶಿಷ್ಟವಾದ ತಲೆಯಾಸರೆಯ ಮೃತ್ಪೀಠಗಳೂ ದೊರೆತಿವೆ. ಕಲ್ಲಿನ ವಸ್ತುಗಳಲ್ಲಿ ನವಶಿಲಾಯುಗಕ್ಕೆ  ಸೇರಿದ ಉಜ್ಜಿ ಚೂಪುಮಾಡಿದ ಅಥವಾ ಕುಕ್ಕಿ ಆಕಾರ ಬರಿಸಿದ ಕಲ್ಕೊಡಲಿಗಳು, ಅವುಗಳ ಜೊತೆಯಲ್ಲಿಯೇ ಶಲ್ಕೋದ್ಯಮಕ್ಕೆ ಸೇರಿದ ಮೂಲಶಿಲೆ, ಅದರಿಂದ ಚಕ್ಕೆ ಎಬ್ಬಿಸಿದ ಕಿರುಶಲ್ಕಾಯುಧಗಳೂ ದೊರೆತಿರುವುದು ಇಲ್ಲಿನ ವಿಶೇಷ. ಈ ಶಲ್ಕ ಶಿಲಾಯುಧಗಳು ತೀರ ಕಿರುಪ್ರಮಾಣದವು. 1-2 ಸೆ.ಮೀಗಳಿಗಿಂತ ಹೆಚ್ಚು ಉದ್ದವಾಗಿಲ್ಲ. ಅಷ್ಟೇನೂ ಕ್ರಮಬದ್ಧವಾಗಿ ಚಕ್ಕೆ ಎಬ್ಬಿಸಿದವೂ ಅಲ್ಲ. ಮೂಲಶಿಲೆ ಶುದ್ಧವಾದುದೂ ಅಲ್ಲ. ಆದ್ದರಿಂದ ಇವುಗಳನ್ನು ಪ್ರಸಿದ್ಧವಾದ ಬ್ರಹ್ಮಗಿರಿ, ಪಿಕ್ಲಿಹಾಳು, ಮಸ್ಕಿ ಮೊದಲಾದ ಕಡೆ ದೊರೆತ ಶಲ್ಕ ಶಿಲಾಯುಧಗಳೊಡನೆ ಹೋಲಿಸಲಾಗದು. ಬಹುಶಃ ನವಶಿಲಾಯುಗಕ್ಕೆ ಮುಂಚಿನ ಕಾಲಕ್ಕೆ ಸೇರಿದ್ದ ಶಲ್ಕೋದ್ಯಮ ಈ ನವಶಿಲಾ-ತಾಮ್ರಶಿಲಾಯುಗದ ಕಾಲದಲ್ಲಿ ಇಲ್ಲಿ ಮುಂದುವರಿದುದನ್ನು ಇದು ಸೂಚಿಸುತ್ತದೆ. ಆದಿಯನ ತಿಟ್ಟಿನಲ್ಲಲ್ಲದೆ ಊರ ಮುಂದಿನ ನಿವೇಶನದಲ್ಲಿಯೂ ಅತ್ಯಂತ ಕೆಳಗಿನಸ್ತರಕ್ಕೆ ಸೇರಿದ ಸ್ವಾಭಾವಿಕ ಭೂಪದರದ ಮೇಲೆಯೇ ಇಟ್ಟಂತಿದ್ದ ನವಶಿಲಾ-ತಾಮ್ರಶಿಲಾಯುಗಕ್ಕೆ ಸೇರಿದ ಮಡಕೆಗಳು, ಬೋಗುಣಿಗಳು, ತಲೆಯಾಸರೆಯ ಮೃತ್ಪೀಠ, ಮುಖನಾಳವುಳ್ಳ ಗಿಂಡಿ ಗುಂಪುಗುಂಪಾಗಿದ್ದುದು ಕಂಡುಬಂದಿದೆ. ಆದರೆ ಅಲ್ಲಿ ಜನ ಹೆಚ್ಚುಕಾಲ ವಾಸಮಾಡಿದ ಕುರುಹುಗಳೇನೂ ಉಳಿದಿಲ್ಲ. ಬಹುಶಃ ಜನ ಇಲ್ಲಿ ವಾಸಕ್ಕೆ ಆರಂಭಿಸಿದ ಸ್ವಲ್ಪಕಾಲದಲ್ಲಿಯೇ ಪ್ರವಾಹ ಬಂದು ಅವರು ತಮ್ಮ ವಸತಿಯನ್ನು ಬದಲಾಯಿಸಿರಬಹುದು ಅಥವಾ ಪೂರ್ಣರೂಪದ ಮಡಕೆಗಳು ಗುಂಪುಗುಂಪಾಗಿ ದೊರೆತಿರುವುದನ್ನು ನೋಡಿದರೆ ಇಲ್ಲಿ ಯಾವುದಾದರೂ ಧಾರ್ಮಿಕ ವಿಧಿಯನ್ನು ನೆರವೇರಿ ಸಿದ್ದಿರ ಬಹುದೆನಿಸುತ್ತದೆ. 

	ಇದಾದ ಬಳಿಕ ಈ ನಿವೇಶನದಲ್ಲಿ ವಸತಿಹೀನ ಸ್ತರಗಳಿದ್ದು ಮೇಲಿನ ಎರಡು ಸ್ತರಗಳಲ್ಲಿ ಮಾತ್ರ ಕ್ರಿಸ್ತಶಕದ ಆರಂಭಕಾಲದ್ದು ಎನ್ನಬಹುದಾದ ವಸ್ತುಗಳು ದೊರೆತಿವೆ. ಇವುಗಳಲ್ಲಿ ಕೆಂಪು ಕಪ್ಪು ಹೊಳಪಿನ ಮಡಕೆಗಳು, ಅಂಥ ಮಡಕೆಗಳ ಮೇಲೆ ಬಿಳಿಯ ಬಣ್ಣದಿಂದ ಅಲೆಯಲೆಯಾಗಿ, ಚುಕ್ಕೆಗಳ ಸಾಲುಗಳಾಗಿ ಇತರ ರೀತಿಯಲ್ಲಿ ಬಿಡಿಸಿರುವ ಚಿತ್ರಗಳು, ಶಂಖದ, ಗಾಜಿನ ಬಳೆಗಳು, ಕಲ್ಲಿನ ಮಣಿಗಳು, ಕದಿರಿನ ತೂಕಗಳು, ಕಬ್ಬಿಣದ ಪದಾರ್ಥಗಳು ದೊರೆತಿದ್ದು ಚಂದ್ರವಳ್ಳಿ, ಬ್ರಹ್ಮಗಿರಿ, ಮಸ್ಕಿ ಮೊದಲಾದ ಕಡೆ ದೊರೆತ ಇಂಥ ವಸ್ತುಗಳನ್ನು ಹೋಲುತ್ತವೆ. ಆದರೆ ಇಲ್ಲಿ ಅವು ಅಷ್ಟು ವ್ಯಾಪಕವಾಗಿ ಹರಡಿಲ್ಲ. 

	ನವಶಿಲಾಯುಗಕ್ಕೆ ಮುಂಚೆಯೂ ಇಲ್ಲಿ ಜನವಸತಿ ಇದ್ದುದಕ್ಕೆ ಹೊಳೆಯ ದಡದಲ್ಲಿ ದೊರೆತ ಹಲವು ಶಲ್ಕಶಿಲಾಯುಧಗಳು ಸಾಕ್ಷಿಯಾಗಿವೆ. 

	ಹೆಮ್ಮಿಗೆಯಲ್ಲಿ ನಡೆದ ಉತ್ಖನನಗಳಿಂದ ಕಾವೇರಿ ಜಲಾನಯನದ ಮೇಲ್ಭಾಗ ಬೆಳೆದುಬಂದ ಸಾಂಸ್ಕøತಿಕ ಪರಂಪರೆಯ ಬಗೆಗೆ ಹೆಚ್ಚಿನ ಬೆಳಕು ಬಿದ್ದಿದೆ. ತಿರುಮಕೂಡಲು ನರಸೀಪುರದ ಉತ್ಖನನಗಳಲ್ಲಿ ಅಸ್ಪಷ್ಟವಾಗಿ ಸೂಚಿತವಾಗಿದ್ದ ಕೆಲವು ಸಾಂಸ್ಕøತಿಕ ಮಜಲುಗಳು ಇಲ್ಲಿ ಸ್ಪಷ್ಟಗೊಂಡಿವೆ.	
(ಎಮ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ